ವಲ್ಲಭಗಣಪತಿಯ ಪರಿಚಯ

ಗಣಪತಿಯ ರೂಪಗಳಲ್ಲಿ ವಲ್ಲಭಗಣಪತಿ ಬಹಳ ವಿಶಿಷ್ಟವಾದದ್ದು. ನಮ್ಮ ಮಂದಿರದ ಗೋಪುರದಲ್ಲಿ ಇದನ್ನು ನೋಡಬಹುದು.
ಬೆಂಗಳೂರಿನಲ್ಲೂ ಹಲವೆಡೆ ವಲ್ಲಭಗಣಪತಿಯ ಮಂದಿರಗಳು ಇವೆ.
ವಲ್ಲಭಾ ಎಂಬ ಕನ್ಯೆಯು ಶಾಪಗ್ರಸ್ತಳಾಗಿ ರಾಕ್ಷಸಿಯಾಗಿ ದೇವತೆಗಳನ್ನು ಋಷಿಗಳನ್ನೂ ಕಾಡುತ್ತಾಳೆ. ಅವಳ ಅಟ್ಟಹಾಸ ತಾಳಲಾರದೆ ಋಷಿಗಳು ಪರಶಿವನ ಬಳಿಗೆ ತೆರಳಿ ತಮ್ಮನ್ನು ರಕ್ಷಿಸಲು ಪ್ರಾರ್ಥಿಸುತ್ತಾರೆ. ಆಗ ಶಿವನು ಸೈನ್ಯಾಧಿಪನಾದ ಸುಬ್ರಹ್ಮಣ್ಯನನ್ನು ಯುದ್ಧಕ್ಕೆ ಹೋಗುವಂತೆ ಆದೇಶಿಸುತ್ತಾನೆ. ಶಿವನ ಆಜ್ಞೆಯಂತೆ ಕುಮಾರನು ಯುದ್ಧಕ್ಕೆ ತೆರಳಿ ವಲ್ಲಭಾಳ ಶಕ್ತಿ ಹಾಗು ಅವಳಿಗಿರುವ ಶಾಪವಿಮೋಚನೆಯ ಮಾರ್ಗ “ವಲ್ಲಭಾ ಗಜಮುಖನಿಂದ ಮಾತ್ರ ಸೋಲ ಬಲ್ಲಳು” ಎಂಬುದನ್ನು ಅರಿತು ಗಣೇಶನ ಬಳಿ ಹೆದರಿ ಬಂದಂತೆ ನಟಿಸುತ್ತಾನೆ.
ಆಗ ಗಣೇಶನು ದಶಭುಜನಾಗಿ ವಿಶ್ವರೂಪ ತಾಳುತ್ತಾನೆ. ಆ ದಶಭುಜನ ರೂಪಕ್ಕೆ ವಲ್ಲಭಾ ಹೆದರಿ ಸೋಲುತ್ತಾಳೆ. ಅವಳನ್ನು ಗಣೇಶನು ತನ್ನ ಸೊಂಡಿಲಲ್ಲಿ ಹಿಡಿದಾಗ ಅವಳ ಶಾಪ ವಿಮೋಚನೆಯಾಗುತ್ತದೆ, ಅವಳನ್ನು ತನ್ನ ಎಡಗಡೆಯ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾನೆ, ಅವಳು ಗಣೇಶನನ್ನು ಪ್ರಾರ್ಥಿಸಿ ಗಣೇಶನಲ್ಲಿ ಲೀನನಾಗುತ್ತಾಳೆ.

ಆ ಸುಂದರ ಗಣಪತಿಯ ದೇಹವು ವಿಶ್ವದ ವರ್ಣನೆಯೇ ಆಗಿದೆ. ಬಲಭಾಗಕ್ಕೆ ಪುರುಷ ರೂಪದಿಂದಲೂ ಎಡಭಾಗಕ್ಕೆ ಸ್ತ್ರೀ ರೂಪದಿಂದಲೂ ಕಾಣುವ ಮೂರ್ತಿ ಕೆಲವೆಡೆ ಇದ್ದರೆ. ಕೆಲವೆಡೆ ಬಲ ಕೈಗಳಲ್ಲಿ ಪುರುಷ ರೂಪದ ದೇವರ ಅಸ್ತ್ರಗಳೂ, ಎಡಗೈಯಲ್ಲಿ ಸ್ತ್ರೀ ರೂಪದ ದೇವಿಯರ ಅಸ್ತ್ರಗಳೂ ಹಾಗೂ ಮಲ್ಲಿಗೆ ಜಾಜಿ ಸಂಪಿಗೆಯ ಹಾರವನ್ನೂ ರುದ್ರಾಕ್ಷಿ ಮಣಿಯ ಹಾರವನ್ನೂ ಧರಿಸಿ ವಲ್ಲಭಾಳನ್ನು ತನ್ನ ಎಡ ತೊಡೆಯ ಮೇಲೆ ಇರಿಸಿಕೊಂಡಿರುವಂತೆಯೂ ನೋಡಬಹುದು. ವಲ್ಲಭಾ ಎಂದರೆ ಮತ್ತೊಂದು ಅರ್ಥವೇ ಶುದ್ಧ ಸತ್ವ ಸ್ವರೂಪ, ಗಣೇಶನ ಶುದ್ಧ ತತ್ವವನ್ನು ಸಾರುವ ಸ್ವರೂಪವೇ ವಲ್ಲಭಗಣಪತಿ.

ವಲ್ಲಭಗಣಪತಿ ತಿರುವಾನೈಕ್ಕಾವಲ್


ಈ ವಿಶಿಷ್ಟ ಮೂರ್ತಿಯು ಪ್ರಕೃತಿ ಪುರುಷರ ಸಂಗಮವನ್ನೂ, ಪಂಚ ಭೂತ ತತ್ವನ್ನೂ ಹಾಗೂ ಧರ್ಮಾರ್ಥಕಾಮಮೋಕ್ಷಗಳನ್ನೂ ಸಾರುತ್ತಿರುವಂತೆ ಕಾಣುತ್ತದೆ.
ಮೊದಲನೆಯ ಕೈಗಳು ವಿಷ್ಣುಲಕ್ಷ್ಮಿಯರನ್ನು – ಶಂಖ ಚಕ್ರಗಳೊಂದಿಗೆ ಜಲ ತತ್ವವನ್ನು ಹಾಗೂ ಪುರುಷಾರ್ಥದ ಧರ್ಮವನ್ನೂ ಸಾರುತ್ತವೆ.
ಎರಡನೆಯ ಕೈಗಳು ಅರ್ಧನಾರೀಶ್ವರರಾದ ಶಿವಪಾರ್ವತಿಯರನ್ನು – ತ್ರಿಶೂಲಪಾಶಗಳೊಂದಿಗೆ ಅಗ್ನಿ ತತ್ವವನ್ನು ಹಾಗು ಪುರುಷಾರ್ಥದ ಅರ್ಥವನ್ನೂ ಸಾರುತ್ತವೆ.
ಮೂರನೆಯ ಕೈಗಳು ಮನ್ಮಥರತಿಯರನ್ನು – ಕಬ್ಬನ ಬಿಲ್ಲು ಹಾಗೂ ಕಮಲ ಹಿಡಿದ ಹಸ್ತಗಳೊಂದಿಗೆ ವಾಯು ತತ್ವವನ್ನು ಮತ್ತು ಪುರುಷಾರ್ಥದ ಕಾಮವನ್ನೂ ಸಾರುತ್ತವೆ.
ನಾಲ್ಕನೆಯ ಕೈಗಳು ವರಾಹಸ್ವಾಮಿ ಭೂದೇವಿಯರನ್ನು ಗದಾ- ಭತ್ತದ ತೆನೆಗಳಿಂದ ಭೂ ತತ್ವವನ್ನು ಮತ್ತು ಪುರುಷಾರ್ಥದ ಮೋಕ್ಷವನ್ನು ಸಾರುತ್ತವೆ.
ಐದನೆಯ ಕೈಗಳು ಪುಷ್ಟಿಪತಿ (ಗಣಪತಿ) ಸಿದ್ಧಲಕ್ಷ್ಮೀಯರನ್ನು ಬಿಂಬಿಸುವ ದಾಳಿಂಬೆ ಹಣ್ಣು ಹಾಗು ದಂತ ವನ್ನು ಹಿಡಿದಿರುವುದು ಆಕಾಶ ತತ್ವವನ್ನು ಸಾರುವ ಸ್ವಯಂ ವಿಷ್ಣುರೂಪನೇ ಆದ ಆ ವರಸಿದ್ಧಿ ವಿನಾಯಕನನ್ನೇ ಸಾರುತ್ತವೆ.

ಈ ವಲ್ಲಭ ನಾಯಕನನ್ನು ಸುಬ್ರಹ್ಮಣ್ಯ ಸ್ವಾಮಿಯು ವಳ್ಳಿಯೊಡನೆ ತನ್ನ ಮದುವೆಯಾಗಲು ಪ್ರಾರ್ಥಿಸಿರುತ್ತಾನೆ. ಆದಕಾರಣ ಅವಿವಾಹಿತ ಪುರುಷ ಸ್ತ್ರೀಯರು ವಲ್ಲಭ ಗಣಪತಿಯ ವ್ರತವನ್ನು ಮಾಡಿ ಮದುವೆಯಾಗುವ ಯೋಗವನ್ನು ಪಡೆಯಬಹುದು ಎಂಬ ನಂಬಿಕೆ ಬಹಳ ಭಕ್ತರಲ್ಲಿ ಈಗಲೂ ಇದೆ. ಇದಕ್ಕೆ ರುಜುವಾಗಿ ಮುತ್ತುಸ್ವಾಮಿ ದೀಕ್ಷಿತರು ತಮ್ಮ ವಲ್ಲಭಾನಾಯಕಸ್ಯ ಎಂಬ ಕೃತಿಯಲ್ಲಿ ವಳ್ಳೀ ವಿವಾಹ ಕಾರಣಸ್ಯ ಗುರುಗುಹಪೋಜಿತಸ್ಯ ಎಂದು ಹೇಳಿದ್ದಾರೆ.


ಶ್ರೀ ಮುತ್ತುಸ್ವಾಮಿ ದೀಕ್ಷಿತರು ತಮ್ಮ ವಲ್ಲಭಾನಾಯಕಸ್ಯ ರಚನೆಯಲ್ಲಿ ಹೀಗೆ ಹೇಳಿದ್ದಾರೆ:

ನಾನು,
ತಾವರೆಯ ದಳಗಳ ಮೃದುವಿನಂತಿರುವ ಅದರಂತೆಯೇ ಕಾಣುವ ಪಾದಗಳುಳ್ಳ,
ಪಾಶಾ ಅಂಕುಶ ಮುಂತಾದ ಅಸ್ತ್ರಗಳನ್ನು ಹಿಡಿದಿರುವ,
ಮಲ್ಲಿಗೆ ಜಾಜಿ ಸಂಪಿಗೆಯ ಹಾರವನ್ನೂ ರುದ್ರಾಕ್ಷಿ ಮಣಿಯ ಹಾರವನ್ನೂ ಧರಿಸಿರುವ,
ಸುಬ್ರಹ್ಮಣ್ಯ ಸ್ವಾಮಿಯು ವಳ್ಳಿಯೊಡನೆ ವಿವಾಹವಾಗಲು ಪೂಜಿಸಲ್ಪಟ್ಟವನೂ ಆ ವಿವಾಹಕ್ಕೆ ಕಾರಣನೂ ಆದವನೂ,
ಕಾಳಿ (ಗೌರಿ), ಕಲಾಮಾಲಿನೀ ( ಸರಸ್ವತೀ ) ಹಾಗೂ ಕಮಲಾಕ್ಷೀ (ಲಕ್ಷ್ಮೀ) ಯರಿಗೆ ಪ್ರಿಯನಾದವನೂ,
ಭಕ್ತರು ಕೇಳಿದ ವರಗಳನ್ನು ನೀಡುವವನೂ ಮೂಷಿಕವಾಹನನಾದ
ಆ ವಲ್ಲಭಾಳ ನಾಯಕನ ಭಕ್ತನಾಗುತ್ತೇನೆ ಎಂದು ರಚಿಸಿದ್ದಾರೆ

ವಲ್ಲಭಾನಾಯಕಸ್ಯ

ಬೇಗಡೆ ರಾಗ – ರೂಪಕ ತಾಳ

ವಲ್ಲಭಾ ನಾಯಕಸ್ಯ ಭಕ್ತೋ ಭವಾಮಿ |
ವಾಂಚಿತಾರ್ಥ ದಾಯಕಸ್ಯ ವರಮೂಷಿಕ ವಾಹನಸ್ಯ ||ಪ|| (ವ)

ಪಲ್ಲವ ಪದ ಮೃದುತರಸ್ಯ ಪಾಶಾಂಕುಶಾದಿ ಧರಸ್ಯ |
ಮಲ್ಲಿಕಾ ಜಾತೀ ಚಂಪಕ ಹಾರಸ್ಯ – ಮಣಿ ಮಾಲಸ್ಯ ||

ವಲ್ಲಿ ವಿವಾಹ ಕಾರಣಸ್ಯ ಗುರುಗುಹ ಪೂಜಿತಸ್ಯ |
ಕಾಳೀ ಕಲಾಮಾಲಿನೀ ಕಮಲಾಕ್ಷೀ ಸನ್ನುತಸ್ಯ ||ಸ.ಚ|| (ವ)

ಸಂಗ್ರಹ
-ಪ್ರಣವಃ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.