श्रीः

ಶ್ರೀ ಗಣೇಶ ಮಂದಿರಂ (ರಿ.)

ತ್ಯಾಗರಾಜನಗರ, ಬೆಂಗಳೂರು.

ಬೆಂಗಳೂರು ದಕ್ಷಿಣ ಬಡಾವಣೆ ಬಸವನಗುಡಿ ವಿಭಾಗದಲ್ಲಿ ನರಸಿಂಹರಾಜಕಾಲೋನಿಯ ಮುಂದುವರಿದ ಭಾಗವೇ ತ್ಯಾಗರಾಜನಗರ, ಪ್ರಸಿದ್ದ ಆಂಗ್ಲ-ಕನ್ನಡ ನಿಘಂಟು ತಜ್ಞರೂ, ಸಂಗೀತಜ್ಞರೂ, ಆಯುರ್ವೇದ ವಿದ್ವಾಂಸರೂ ಆಗಿದ್ದ ದಿವಂಗತ ದ.ಕೃ.ಭಾರದ್ವಾಜರಿಂದ ನಾಮಕರಣಗೊಂಡ ಬಡಾವಣೆಯೇ ತ್ಯಾಗರಾಜನಗರ. ಇದಕ್ಕೆ ಪೋಷಕವಾದ ಭಾವಚಿತ್ರ ಈಗಲೂ ಗಣೇಶ ಮಂದಿರದ ರಾಮದೇವರಗುಡಿಯಲ್ಲಿ ಸ್ವಾಮಿಯ ಹಿಂಭಾಗದ ಗೋಡೆಯ ಮೇಲೆ ವಿರಾಜಮಾನವಾಗಿದೆ.

ಈ ತ್ಯಾಗರಾಜನಗರಕ್ಕೆ ಕಳಶಪ್ರಾಯವಾದದ್ದು ಶ್ರೀ ಗಣೇಶ ಮಂದಿರಂ. ನಾಗಸಂದ್ರ ವೃತ್ತದಿಂದ ದಕ್ಷಿಣಕ್ಕೆ ಡಿ.ವಿ.ಜಿ. ರಸ್ತೆಯಲ್ಲಿ ಬಂದರೆ ಸಿಗುತ್ತದೆ ಈ ಗಣೇಶ ಮಂದಿರ. ಈ ಮಂದಿರ ಅಥವಾ ದೇವಾಲಯದ ಸಂಸ್ಥಾಪಕರು ನಡೆದಾಡುವ ಹಾಗೂ ಮಾತನಾಡುವ ಗಣೇಶನೆಂದೇ ಪ್ರಸಿದ್ದರಾಗಿದ್ದು ಮಹಾಗಣಪತಿಯ ಪ್ರಚಂಡ ಉಪಾಸಕರೂ ಆಗಿದ್ದ ಪರಮಪೂಜ್ಯ ದಿ।। ಬಿ. ಎನ್. ರಾಜಗೋಪಾಲ ಅಯ್ಯರ್‌ರವರು. ಬಹಳ ಜನಕ್ಕೆ ಇವರು “ಓಂ ಗಣೇಶ” ಎಂದೇ ಚಿರಪರಿಚಿತರಾಗಿದ್ದವರು.

ಕೆಂಗೇರಿಯ ಸಮೀಪದ ಕಂಬೀಪುರವು ಇವರ ಹಿರಿಯರ ಅಥವಾ ಪೂರ್ವಜರ ವಾಸಸ್ಥಾನವಾಗಿತ್ತು. ಇವರ ತಂದೆ ದಿವಂಗತ ನೀಲಕಂಠಶಾಸ್ತ್ರಿಗಳು ತಮ್ಮ ಧರ್ಮಪತ್ನಿ ದಿ।। ಸೀತಾಲಕ್ಷ್ಮಿ ಅಮಾಲ್‌ರವರನ್ನು ಕರೆದುಕೊಂಡು ಬಂದು ಬೆಂಗಳೂರುನಗರ ಪ್ರದೇಶದಲ್ಲಿ ಧರ್ಮರಾಯನಗುಡಿ ಬಳಿಯ ಅಲಸೂರುಪೇಟೆಯಲ್ಲಿ ವಾಸಮಾಡತೊಡಗಿದ್ದರು. ಅವರು ಬಡಮಕ್ಕಳಿಗಾಗಿ ಒಂದು ಶಾಲೆಯನ್ನು “ಶಾರದಾ ಪಾಠಶಾಲಾ” ಎಂಬ ಹೆಸರಿನಲ್ಲಿ ನಡೆಸುತ್ತಿದ್ದರು. ತಂದೆಯವರ ಅಕಾಲಮರಣದಿಂದ ಶಾಲೆಯನ್ನು ನಡೆಸುವುದಿರಲಿ ಸಂಸಾರವನ್ನು ನಿಭಾಯಿಸುವುದೂ ಸಮಸ್ಯೆ ಯಾಗಿತ್ತು.

ಆಗ, ಅಯ್ಯರ್‌ರವರು ಲೆಕ್ಕವಿಭಾಗದಲ್ಲಿ ಪರಿಣತರಾಗಿದ್ದರಿಂದ, ಹೊಂಬೇಗೌಡನಗರ (ವಿಲ್ಸನ್ ಗಾರ್ಡನ್)ದಲ್ಲಿದ್ದ ಸಿಟಿ ಮಿಲ್ಸ್ ಸಪ್ಲಸ್ ಎಂಬ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. 1946ರಲ್ಲಿ ನಾವು ಎನ್.ಆರ್.ಕಾಲೋನಿಯಲ್ಲಿ ವಾಸವಿದ್ದಾಗ ಅಲ್ಲಿಂದಲೇ ನಮ್ಮ ಮನೆಗೆ ಹಾಲು ಸರಬರಾಜಾಗುತ್ತಿದ್ದುದು ನನಗೆ ಸ್ಮರಣೆಯಲ್ಲಿದೆ. ಆಗ ನಮ್ಮ ತಂದೆಯವರು ಸ್ಟೇಟ್ ಹುಜೂರ್ ಟ್ರೆಜರಿ ಆಫಿಸರ್ ಆಗಿದ್ದರು. ಆಗ, ಅಯ್ಯರ್‌ರವರು ಜಯಚಾಮರಾಜೇಂದ್ರ (ಜೆ.ಸಿ.ರಸ್ತೆ) ರಸ್ತೆಯಲ್ಲಿ ರೆಡ್ಡಿ ಜನಸಂಘದ ಎದುರಿಗಿದ್ದ ಆಗಿನ ಭಾರತ್ ಚಿತ್ರಮಂದಿರದ ಹಿಂಬದಿಗಿದ್ದ ಕೆಲವು ಮನೆಗಳಲ್ಲೊಂದರಲ್ಲಿ ವಾಸಮಾಡುತ್ತಿದ್ದರು. ಆಗ, ಅಲ್ಲಿ ವಿಜಯಲಕ್ಷ್ಮಿ ಪ್ರೆಸ್ ಎಂಬ ಮುದ್ರಣಾಲಯವಿತ್ತು, ಅದು ನನಗೆ ನೆನಪಿದೆ. ಶ್ರೀ ಅಯ್ಯರ್‌ರವರು ಅಲ್ಲಿಂದಲೇ ಸಿಟಿ ಮಿಲ್, ಸಪ್ಪೆಸ್‌ಗೆ ನಿತ್ಯವೂ ಹೋಗಿ ಬರುತ್ತಿದ್ದರು. ಒಮ್ಮೊಮ್ಮೆ ಕೆಲಸದ ಒತ್ತಡದಿಂದ ಮನೆಗೆಬರುವ ವೇಳೆಗೆ ರಾತ್ರಿ 10-11ಘಂಟೆಯಾಗಿ ಬಿಡುತ್ತಿತ್ತು.

ಹೀಗೆ ಒಂದು ದಿನ ರಾತ್ರಿ 11-00ರವೇಳೆಯಲ್ಲಿ ಕೆಲಸಮುಗಿಸಿ ಮನೆಯ ಕಡೆಗೆ ಹೊರಟರು. ಈಗಿನ ಲಾಲ್‌ಬಾಗ್ ಎಂ.ಟಿ.ಆರ್. ಬಳಿಯ ಊರ್ವಶಿ ಚಿತ್ರಮಂದಿರ ಹಾಗೂ ಕೆ.ಹೆಚ್.ಜೋಡಿ ರಸ್ತೆಯ ಮಧ್ಯಭಾಗದ ರಸ್ತೆಯಲ್ಲಿ ಈಗಿನ ಕುಟುಂಬ ನ್ಯಾಯಾಲಯದ ಎದುರಿಗಿರುವ ಪ್ರಾಚೀನ ವೀರಶೈವ ಮಠ (ಕೊಳದ ಮಠ ಎನ್ನುತ್ತಾರೆ)ದ ಪ್ರವೇಶ ದ್ವಾರದ ಹೊರಭಾಗದಲ್ಲಿ ಚಿಕ್ಕದಿಬ್ಬವೊಂದರ ಮೇಲಿದ್ದ ಗದ್ದಿಗೆ (ಗ್ರಾಮೀಣ ಜನರ ಭಾಷೆಯಲ್ಲಿ ಮೃತರಾದ ಪೂಜ್ಯ ಗುರುಗಳ ಸಮಾಧಿಗೆ ಗದ್ದಿಗೆ ಎಂದು ಹೆಸರಿದೆ) ಯಮೇಲೆ ಭಂಗಿ ಸೇದುತ್ತಾ ಕುಳಿತಿದ್ದ ವ್ಯಕ್ತಿಯೊಬ್ಬರು ನಮ್ಮ ಅಯ್ಯರ್‌ರವರನ್ನು ಏಯ್! ಇಲ್ಲಿ ಬಾರಪ್ಪಾ! ಎಂದು ಪ್ರೇಮಪೂರ್ವಕ ಧ್ವನಿಯಲ್ಲಿ ಕರೆದರು. ಅದರಿಂದ ಆಕರ್ಷಿತರಾಗಿ, ಆ ಗದ್ದಿಗೆಯ ಬಳಿ ಸಾರಿದರು.

ಆ ಭಂಗಿಸಾಧುಗಳು, ಮಗು! ನಿನಗೆ ನಾನೀಗ, ಶ್ರೀ ಗಣಪತಿ ಮೂಲಮಂತ್ರವನ್ನು ಕೊಡಬೇಕೆಂದಿದ್ದೇನೆ, ತೆಗೆದುಕೊಳ್ಳುವೆಯಾ ಎಂದು ಕೇಳಿದರು. ಆ ಪೂಜ್ಯರ ಧ್ವನಿಯಲ್ಲಿ ತಾಯಿಯ ವಾತ್ಸಲ್ಯವಿತ್ತು. ಅವರು ಇನ್ನೊಂದು ಮಾತನ್ನೂ ಹೇಳಿದರು. ನೀನೀಗ ನೇರವಾಗಿ ಮನೆಗೆ ಹೋಗು, ಊಟಮಾಡು, ನಂತರ ಅಮ್ಮಾ ನಾನೀಗ ಹೊರಗೆ ಹೋಗಿಬರುತ್ತೇನೆ ಬಾಗಿಲು ಹಾಕಿಕೋ ಎಂದು ಹೇಳು. ಅವರು ಹೋಗಿ ಬಾ ಎಂದರೆ, ಈ ಕಾರ್ಯವು ಗಣೇಶನಿಗೆ ಇಷ್ಟವಾಗಿದೆಯೆಂದು ಭಾವಿಸಿ ಬರುವುದು, ಅದೂ ನಿನ್ನಿಷ್ಟ ಎಂದು ಹೇಳಿ ಕಳಿಸಿದರು. ಇವರೂ ಮನೆಗೆ ಬರುವ ಹೊತ್ತಿಗೆ ಮಧ್ಯರಾತ್ರಿಯಾಗಿತ್ತು. ಅವರ ತಾಯಿಯವರು ಸಹ ಏಕೆ ಏನು ಎಂದು ಪ್ರಶ್ನಿಸಿದೆ ಸುಮ್ಮನೆ ಹೋಗಿಬಾ ಎಂದರು. ಇದೂ ದೈವಸಂಕಲ್ಪವೆಂದು ಭಾವಿಸಿ ಆ ಗದ್ದಿಗೆ ಬಳಿಗೆ ಬಂದರು.

ಆ ಪೂಜ್ಯ ಸಾಧುಗಳು ಇವರನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಶ್ರೀ ಮಹಾಗಣಪತಿಯ ಮೂಲಮಂತ್ರವನ್ನು ಉಪದೇಶಿಸಿದರು. ಆಗ ಹೊರಡುವ ಮುನ್ನ, ಗುರುಗಳೇ! ಈ ಕತ್ತಲಿನಲ್ಲಿ ನಿಮ್ಮ ಮುಖವನ್ನೆಲ್ಲ ನೋಡಲಾಗಲಿಲ್ಲವಲ್ಲಾ ಎಂದರಂತೆ. ಅದಕ್ಕೆ ಆ ಸಾಧುಗಳು ಭಂಗಿಯನ್ನು ಆಳವಾಗಿ ಸೇದುತ್ತೇನೆ. ಅದರ ಬೆಳಕಿನಲ್ಲಿ ನನ್ನನ್ನು ನೋಡು ಎಂದರಂತೆ. ಹಾಗೆ ಭಂಗಿಯ ತುದಿಯಲ್ಲಿ ಬೆಂಕಿಯು ಅರಳಿದಾಗ, ನೋಡಿದರೆ ಅವರು ಕತ್ತಿನಿಂದ ಮೇಲಕ್ಕೆ ಲಿಂಗಾಕಾರವಾಗಿ ಕಂಡರಂತೆ. ಅಲ್ಲಿಂದ ಗುರುಗಳ ಅಪ್ಪಣೆಪಡೆದು ಮನೆಗೆ ಬಂದರಂತೆ.

ಶ್ರೀ ಅಯ್ಯರ್‌ರವರು ಆರ್ಕಾಟ್ ಶ್ರೀನಿವಾಸಾಚಾರ್ ರಸ್ತೆಯಲ್ಲಿದ್ದ ಬಿ.ವಿ. ನಾರಾಯಣಸ್ವಾಮಿ ಸಂಸ್ಥೆಗೆ ಅಕೌಂಟೆಂಟ್ ಆಗಿ ಸೇರಿದರು. ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತಾ ಬಂತು. ತ್ಯಾಗರಾಜನಗರದಲ್ಲಿ ಮನೆ ಕಟ್ಟಿಕೊಂಡು ವಾಸಕ್ಕೆ ಬಂದು ತಮ್ಮ ತಂದೆಯವರ ಕಾಲದಲ್ಲಿ ನಡೆಸುತ್ತಿದ್ದ ಶಾರದಾ ಪಾಠಶಾಲೆಯನ್ನು ಪುನರಾರಂಭಿಸಿದರು. ಅದು ಪ್ರೌಢಶಾಲೆಯವರೆಗೂ ಬೆಳೆದು ದೀರ್ಘಕಾಲ ಅಸ್ತಿತ್ವದಲ್ಲಿತ್ತು.

ಆ ದಿನದಿಂದ ಹಂತಹಂತವಾಗಿ ಗುರುಗಳ ಶ್ರೀ ಮಹಾ ಗಣಪತಿಯ ಉಪಾಸನೆಯು ಮುನ್ನಡೆಯಿತು. ಆಗ ಅವರಿಗೆ ಒಂದು ಪುಟ್ಟ ಗಣೇಶನ ಗುಡಿಯನ್ನು ನಿರ್ಮಿಸಬೇಕೆನಿಸಿತು. ಈಗಿನ ಗವಿಗಂಗಾಧರೇಶ್ವರನ ಗುಡಿಯ ಮಹಾದ್ವಾರವು ದಕ್ಷಿಣದ ಕಡೆಗೆ ಮುಖ ಮಾಡಿಕೊಂಡಿದೆ. ಅಲ್ಲಿಂದ ಮುಂದಕ್ಕೆ ದೊಡ್ಡ ಮೈದಾನವಿದೆ. ಅಲ್ಲೇ ಸ್ವಾಮಿಯ ರಥೋತವವು ನಡೆಯುತ್ತದೆ. ಹಾಗೆಯೇ ಮುಂದುವರೆದರೆ ಮೈದಾನದ ದಕ್ಷಿಣದ ತುದಿಗೆ ಬರುತ್ತೇವೆ. ಅಲ್ಲಿ ಚಿಕ್ಕ ಉದ್ಯಾನವಿದ್ದು ಅದರ ಮಧ್ಯದಲ್ಲಿ ಪುಟ್ಟ ಗಣಪತಿಯ ಗುಡಿಯಿದೆ. ಅಂತಹ ಪುಟ್ಟ ಗುಡಿಯನ್ನು ತಾವು ತ್ಯಾಗರಾಜನಗರದ (2ನೇ ಬ್ಲಾಕ್‌ನಲ್ಲಿರುವ ಅಯ್ಯರ್ ಅವರದ್ದೇ ಸ್ವಂತ ನಿವೇಶನದಲ್ಲಿ ನಿರ್ಮಿಸಬೇಕೆಂದು ತೀರ್ಮಾನಿಸಿದರು. ಹಾಗೆಯೇ ತಾವು ಕೂಡಿಟ್ಟ ಹಣದಲ್ಲೇ ಪುಟ್ಟ ಗುಡಿಯೊಂದನ್ನು ನಿರ್ಮಿಸಿದ್ದೂ ಆಯಿತು. ಈ ಗುಡಿಯ ಶಂಕುಸ್ಥಾಪನೆಯನ್ನು ಶ್ರೀ ಅಯ್ಯರ್‌ರವರ ವಿದ್ಯಾಗುರುಗಳಲ್ಲೊಬ್ಬರಾದ ದಿ।। ಚಿನ್ನಯಪುರಿ ಸ್ವಾಮಿಗಳು (ಶಂಕರ ಲಿಂಗಾಶ್ರಮ, ಅರಸೀಕೆರೆ) ಬಂದು ನಡೆಸಿಕೊಟ್ಟರು. ಇನ್ನು ವಿಗ್ರಹ ಮಾಡಿಸಬೇಕೆಂದು ತೀರ್ಮಾನಿಸಿ ಈಗಿನ ಪತ್ರಿಕೋದ್ಯೋಗಿಗಳ ಸಂಘದವರ ಬಡಾವಣೆಯಲ್ಲಿನ ನಿವೇಶನವೊಂದರಲ್ಲಿ ಬಾಡಿಗೆಗಿದ್ದ ಶಿಲ್ಪಿ ದಿ ಲಕ್ಷ್ಮಣ ಸ್ವಾಮಿ ಪಿಳ್ಳೆಯವರ ಬಳಿ ಚರ್ಚಿಸಿದರು.

ಈ ವೇಳೆಗೆ ಅಲ್ಲೇ ಸುತ್ತಾಮುತ್ತ ಓಡಾಡುತ್ತಿದ್ದವರನೇಕರು ಹೇಗೂ ತ್ಯಾಗರಾಜನಗರದಲ್ಲಿ ಯಾವಗುಡಿಯೂ ಇಲ್ಲ, ಆದ್ದರಿಂದ ಈ ಪುಟ್ಟ ಗುಡಿಗೆ ಬದಲು ದೊಡ್ಡಗುಡಿಯೊಂದನ್ನು ನಿರ್ಮಾಣ ಮಾಡೋಣ, ನಾವೂ ಕೈಲಾದಷ್ಟು ಸಂಗ್ರಹಿಸುತ್ತೇವೆ ಎಂದು ನಂಬಿಸಿ, ಕಟ್ಟಿದ್ದ ಗುಡಿಯನ್ನು ಕೆಡವಿಸಿಬಿಟ್ಟರು, ಆಗ ನಮ್ಮ ಗುರುಗಳು ತಮಿಳುನಾಡಿನ ಪ್ರಸಿದ್ದ ವಾಸ್ತುಶಿಲ್ಪಿ ಕುಮರೇಶನ್ ಸ್ಥಪತಿಯನ್ನು ಕಂಡು ಚರ್ಚಿಸಿ ಅವರು ಹಾಕಿಕೊಟ್ಟ ನಕ್ಷೆಗನುಸಾರವಾಗಿ ಮೂರು ಗರ್ಭಗುಡಿಗಳನ್ನು ಒಂದು ಆರತಿ ಮಂಟಪವನ್ನು ಉಳ್ಳಂತೆ ಸಂಪೂರ್ಣ ಗಟ್ಟಿಕಲ್ಲಿನಲ್ಲಿ ದೇವಾಲಯ ನಿರ್ಮಾಣವಾಗತೊಡಗಿತ್ತು. ಅರ್ಧದಷ್ಟು ನಿರ್ಮಾಣವಾಗುತ್ತಿದ್ದಾಗ ಸಮಿತಿಯ ಸದಸ್ಯರು ಒಳಜಗಳಮಾಡಿ ಪರಸ್ಪರ ದ್ವೇಷಮಾಡುತ್ತಾ ಕಡೆಗೆ ಹಣ ಸಂಗ್ರಹಿಸುವುದಿರಲಿ ಗುಡಿಯ ಕಡೆಗೆಬರುವುದನ್ನೂ ನಿಲ್ಲಿಸಿಬಿಟ್ಟರು.

ತಾನು ತನ್ನ ಇತಿ ಮಿತಿಯಲ್ಲಿ ಒಂದು ಪುಟ್ಟ ಗುಡಿಯನ್ನು ಕಟ್ಟಿ ಅದರಲ್ಲೇ ಆನಂದವನ್ನು ಕಾಣಬೇಕೆಂದಿರುವಾಗ ಈ ಬಡಾವಣೆಯ ಉದ್ದಾರಕರೆಂದು ಹೇಳಿಕೊಳ್ಳುವ ಈ ಡೋಂಗೀ ಭಕ್ತರು, ತಾನು ಕಟ್ಟಿದ ಗುಡಿಯನ್ನು ಕೆಡವಿಸಿದ್ದಲ್ಲದೇ ದೊಡ್ಡದಾಗಿ ದೇವಾಲಯವನ್ನು ನಿರ್ಮಿಸಲು ಮುಂದಾಗಿ ಅರ್ಧಕ್ಕೇ ಕಟ್ಟಡ ನಿರ್ಮಾಣವನ್ನು ನಿಲ್ಲಿಸಿ, ಎಲ್ಲಾ ಅರ್ಧಂಬರ್ಧ ಮಾಡಿ ಶ್ರೀ ಆಯ್ಯರ್‌ರವರನ್ನು ನಡುನೀರಿನಲ್ಲಿ ಕೈಬಿಟ್ಟು ಹೊರಟು ಹೋದರು.

ಆಗ ಅಯ್ಯರ್‌ರವರು ಅನುಭವಿಸುತ್ತಿದ್ದ ಸಂಕಟವನ್ನು ಯಾರಮುಂದೆ ಹೇಳಿಕೊಳ್ಳುವುದು, ಶ್ರೀ ಗಣಪತಿಯಲ್ಲಿ ಹೇಳಿಕೊಳ್ಳಬೇಕು, ಕೇಳಿಕೊಳ್ಳಬೇಕು, ಬೇಡಿಕೊಳ್ಳಬೇಕು, ಮಕ್ಕಳು ತಾವು ಬಯಸಿದ್ದನ್ನು ಪಡೆದುಕೊಳ್ಳಲು ಹಠಮಾಡುವಂತೆ ಎಂದು ತೀರ್ಮಾನಿಸಿ ದೀಕ್ಷೆ ಕುಳಿತು ಸಾಧನೆ ಮಾಡತೊಡಗಿದರು. ಪ್ರಭೂ! ನೀನು ವಿಘ್ನಕಾರಕನೂ ಹೌದು, ವಿಘ್ನ ನಾಶಕನೂ ಹೌದು, ನೀನೇ ನಿಂತು ನಿನ್ನ ಈ ಅರ್ಧಂಬರ್ಧವಾಗಿರೋ ಈ ಗುಡಿಯನ್ನು ಪೂರ್ತಿಗೊಳಿಸಿ, ತತ್ ಸೃಷ್ಣಾ ತದೇವಾನುಪ್ರಾವಿಶತ್ (ತಾನು ಸೃಷ್ಟಿಮಾಡಿ, ಆ ಸೃಷ್ಟಿಯ ಒಳಗೆ ಪ್ರವೇಶಿಸಿದನು-ತೈಃ ಉ. ಆನ೦ದವಲ್ಲಿ) ಎಂಬ ಋಷಿವಾಣಿ ಯಂತೆ , ನೀನು ನಿರ್ಮಿಸಿದಗುಡಿಯೊಳಗೇ ನೀನೇ ಪ್ರತಿಷ್ಠಾಪಿತನಾಗು! ಎಂದು ಪ್ರಾರ್ಥಿಸುತ್ತಾ ಬಂದರು. ಎಲ್ಲೆಲ್ಲಿಂದಲೋ ಯಾಲ್ಯಾರಿಂದಲೋ ಹಣ ಬರತೊಡಗಿತು. 1967ರ ಫೆಬ್ರವರಿ ಅಂದರೆ ಮಾಘ ಶುದ್ಧ ಪಂಚಮೀ ದಿನ ಶ್ರೀವರಸಿದ್ಧಿ ವಿನಾಯಕನು ಸುಪ್ರತಿಷ್ಠಿತನಾದನು.

ಈ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ತಿಳಿಸಲು ಬಯಸುತ್ತೇವೆ. ಅದೇನೆಂದರೆ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಕೃಷ್ಣ ಲೋಹ ಶಿಲಾ (ಬ್ಲಾಕ್ ಮೆಟಲ್ ಸ್ಟೋನ್) (ಇದನ್ನು ಕೆತ್ತುತ್ತಿದ್ದಾಗ ತಾಮ್ರದ ಹಂಡೆಯನ್ನು ಕುಟ್ಟಿದಾಗ ಬರುವ ಶಬ್ದವು ಕೇಳಿಸುತ್ತದೆ. ಆದ್ದರಿಂದ ಇಂತಹ ಶಿಲೆಗಳಿಗೆ ಲೋಹಶಿಲೆ ಅಥವಾ ಮೆಟಲ್ ಸ್ಪೂನ್ ಎಂದು ಹೆಸರು ಬಂದಿದೆ) ವಿಗ್ರಹವು ದಿ| ಲಕ್ಷಣಸ್ವಾಮಿ ಪಿಳ್ಳೆಯವರ ಅಧೀನದಲ್ಲಿದ್ದ ಸ್ಥಪತಿಯಿಂದ ನಿರ್ಮಿಸಲ್ಪಟ್ಟಿತು.

ವಿಗ್ರಹ ಪ್ರತಿಷ್ಠಾಪನೆಗೆ ಕೆಲವು ವರ್ಷಗಳ ಮೊದಲೇ ಅದನ್ನು ತಂದು ಮಂದಿರದ ಹಿಂಬದಿಯಲ್ಲಿನ ನಿವೇಶನದಲ್ಲಿ ಕಟ್ಟಿದ್ದ ಯೋಗಮಂದಿರದಲ್ಲಿ ಇರಿಸಿ ಅಲ್ಲಿಯೇ ನಿತ್ಯವೂ ಪೂಜೆಯಾಗ ತೊಡಗಿತ್ತು. ಅನಧಿಕೃತವಾಗಿ ಸ್ವಾಮಿಯು ಅಲ್ಲೇ ಪ್ರತಿಷ್ಠಿತನಾಗಿ ಬಿಟ್ಟಿದ್ದನು. ಅದು ನಮಗೆ ಗೊತ್ತಾದುದು ಆ ವಿಗ್ರಹವನ್ನು ಜಲಾಧಿವಾಸಕ್ಕೆ ತರಲು ಬಂದಾಗ, ಸುಮಾರು ಇಪ್ಪತ್ತು ಜನರು ಬೊಂಬಿಗೆ ನೀರು ಸೇದುವ ಹಗ್ಗವನ್ನು ಬಿಗಿದು ಎಳೆದರೂ ಕಿಂಚಿತ್ತೂ ಜರುಗದಿದ್ದಾಗ, ಶ್ರೀ ರಾಜಗೋಪಾಲಯ್ಯರ್‌ ಅವರು ಕಣ್ಣೀರಿಡುತ್ತಾ ನಮ್ಮಪ್ಪಾ! ನೀನು ಇಲ್ಲಿಯೇ ಇರುತ್ತೇನೆಂದು ಹಠ ಮಾಡಬೇಡಪ್ಪಾ. ಈ ದಾಸನಲ್ಲಿ ಕರುಣೆಯಿಟ್ಟು ನಮ್ಮ ಜೊತೆ ಸಹಕರಿಸಪ್ಪಾ ಎಂದು ಅಂಗಲಾಚಿ ಬೇಡಿಕೊಂಡರು. ಆ ಮೇಲೆ ಇಬ್ಬರೇ ಸ್ವಾಮಿಯ ವಿಗ್ರಹವನ್ನು ಸಲೀಸಾಗಿ ಜರುಗಿಸುತ್ತಾ ಜಲಾಧಿವಾಸದ ತೊಟ್ಟಿಗೆ ಕರೆತಂದರು.

ಈ ಸಂದರ್ಭದಲ್ಲಿ ಇನ್ನೊಂದು ವಿಷಯವನ್ನು ಇಲ್ಲಿ ಜ್ಞಾಪಿಸಿಕೊಳ್ಳಬೇಕಾಗಿದೆ. ಅದೇನೆಂದರೆ, ಮಾಡಲ್ ಹೌಸ್ ರಸ್ತೆಯಲ್ಲಿ ವಾಸವಾಗಿದ್ದ ದಿ| ಬೂದಿಗೆರೆ ಕೃಷ್ಣಮೂರ್ತಿಯವರು ಶಿವಪಂಚಾಯತನ ಗುಡಿಯನ್ನು ಕಟ್ಟಿಸಲು ನೆರವಾದರು. ಅವರ ಇಚ್ಚೆಯಂತೆ ಆದಿತ್ಯ, ಅಂಬಿಕಾ, ವಿಷ್ಣು, ಗಣನಾಥ, ಮಹೇಶ್ವರ ಮತ್ತು ನಂದಿ ಇಷ್ಟು ವಿಗ್ರಹಗಳನ್ನೂ ಕೆತ್ತಿಸಲಾಯಿತು. ನರ್ಮದಾ ನದಿಯ ತಳದಿಂದ ಪ್ರಕೃತಿ ನಿರ್ಮಿತವಾದ ಸ್ವಯಂಭೂಲಿಂಗವನ್ನು ದಿ। ಕೃಷ್ಣಮೂರ್ತಿಯವರು ತರಿಸಿಟ್ಟುಕೊಂಡಿದ್ದುದನ್ನು ಇಲ್ಲಿಗೆ ಅರ್ಪಿಸಿದ್ದರು. ಅದಕ್ಕೆ ಮಲ್ಲಿಕಾರ್ಜುನ ಎಂದು ಅವರೇ ಹೆಸರಿಟ್ಟಿದ್ದರು. ಪಾಣಿ ಪೀಠವನ್ನು ಬೆ೦ಗಳೂರಿನಲ್ಲಿ ಮಾಡಿಸಲಾಯಿತು.

ಹಾಗೆಯೇ ಮತ್ತೊಂದು ವಿಷಯವನ್ನೂ ಇಲ್ಲಿ ಪ್ರಸ್ತಾಪಿಸುತ್ತಿದ್ದೇವೆ. ಹೇಗೆ ಶ್ರೀ ಗಣೇಶನ ಉತ್ಸವವನ್ನು ದೇವಾಲಯ ನಿರ್ವಾಣಕ್ಕೆ ಅನೇಕ ವರ್ಷಗಳ ಹಿಂದಿನಿಂದಲೂ ನಡೆಸಿಕೊಂಡುಬರಲಾಗುತ್ತಿದೆಯೋ ಹಾಗೆಯೇ ತ್ಯಾಗರಾಜನಗರ ದಲ್ಲೇ ಇನ್ನೊಂದು ಸಂಘವು ಶ್ರೀ ರಾಮೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆ ಸಂಘದ ಸದಸ್ಯರೂ ಶ್ರೀ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಎರಡು ಸ೦ಸ್ಥೆಗಳಲ್ಲಿ ಹೊಂದಾಣಿಕೆಯಿದ್ದುದರಿಂದ ಕ್ರಮೇಣ ಗಣೇಶಮಂದಿರ ಸಂಸ್ಥೆಯಲ್ಲಿ ರಾಮೋತ್ಸವಸಂಘವು ಲೀನವಾಯಿತು. ಆ ಸಂಸ್ಥೆಯವತಿಯಿಂದ ಶ್ರೀ ರಾಮ, ಸೀತೆ, ಲಕ್ಷಣ ಮತ್ತು ಮಾರುತಿಯವರ ವಿಗ್ರಹಗಳನ್ನು ಮಾಡಿಸಿ, ಗಣೇಶ ದೇವಾಲಯಕ್ಕೆ ಅರ್ಪಿಸಲಾಯಿತು. ಹೀಗೆ ಶ್ರೀಗಣೇಶನ ಬಲಬದಿಯ ಗರ್ಭಗುಡಿಯಲ್ಲಿ ಶ್ರೀ ಸೀತಾ ಲಕ್ಷ್ಮಣ ಹನುಮತ್ಸಮೇತ ಶ್ರೀ ರಾಮದೇವರನ್ನೂ ಎಡಬದಿಯ ಗರ್ಭಗುಡಿಯಲ್ಲಿ ಶಿವ ಪಂಚಾಯತನ ವಿಗ್ರಹಗಳಿರುವಂತೆ ವ್ಯವಸ್ಥೆ ಮಾಡಿಸಲಾಯಿತು. ಮೂರು ಗರ್ಭಗುಡಿಯಲ್ಲಿನ ವಿಗ್ರಹಗಳ ಪ್ರತಿಷ್ಠಾಪನೆಯು ಒಂದೇ ಮುಹೂರ್ತದಲ್ಲಿ ನೆರವೇರಿತು.

ಇನ್ನು ಪ್ರತಿಷ್ಠಾಪನೆಯ ದಿನ ಅಂದರೆ ಮಾಘ ಶುಕ್ಲ ಪಂಚಮೀ ಫೆಬ್ರವರಿ 1967ರಂದು ನಡೆದ ಪವಾಡವನ್ನು ಜ್ಞಾಪಿಸಿ ಕೊಳ್ಳುತ್ತಿದ್ದೇವೆ. | ಅಂದು ಒಂದು ಸಾವಿರ ಜನಕ್ಕೆ ದೊನ್ನೆಯಲ್ಲಿ ಪುಳಿಯೋಗರೆ, ಮೊಸರನ್ನ, ಸಜ್ಜಿಗೆ ಉಂಡೆಯನ್ನು ಇಟ್ಟು ಹಂಚುವುದು. ಸೇವಾಕರ್ತರು, ದಾನಿಗಳು, ವೈದೀಕರು ಹಾಗೂ ಸ್ವಯಂಸೇವಕರು ಸೇರಿ ಒಟ್ಟು ಸುಮಾರು 250 ಜನಕ್ಕೆ ಕುಳ್ಳಿರಿಸಿ ಊಟ ಬಡಿಸುವುದು ಎಂದು ತೀರ್ಮಾನವಾಗಿತ್ತು. ಪ್ರಸಾದದ ವಿತರಣೆ ಶುರುವಾಯಿತು ಅಷ್ಟರಲ್ಲಿ ಯಾರೋ ಒಬ್ಬರು ದಯವಿಟ್ಟು ಎಲ್ಲರೂ ಕುಳಿತು ಭೋಜನ ಪ್ರಸಾದ ಉಂಡುಹೋಗತಕ್ಕದ್ದೆಂದು ಘೋಷಿಸಿ ಬಿಟ್ಟರು. ಸುಮಾರು 400-500ಜನ ಊಟಕ್ಕೆ ಕುಳಿತು ಬಿಟ್ಟಿದ್ದಾರೆ. ಅವರಲ್ಲಿ ಅರ್ಧಜನಕ್ಕಾಗುವಷ್ಟು ಮಾತ್ರ ಅಡುಗೆ ಇದೆ. ಎಂಥ ಪರೀಕ್ಷೆಯಿದು, ಆ ಕೂಡಲೇ ಅಪ್ಪಅವರು, ಒಳಗೆ ಹೋಗಿ ಅವರ ಷಡ್ಡಕಂದಿರು ಹಾಗೂ ಅಡುಗೆ ಜವಾಬ್ದಾರಿ ಹೊತ್ತವರೂ ಆದ ದಿ। ರಾಮಕೃಷ್ಣಯ್ಯರ್ (ಅವರನ್ನು ನಾವು ದೊಡ್ಡ ಎಂದು ಕರೆಯುತ್ತಿದ್ದೆವು) ಅವರಿಗೆ, ಒಟ್ಟು ಅನ್ನವನ್ನು ರಾಶಿಹಾಕಿರಿ ಯಾರಿಗೂ ಬಡಿಸಬೇಡಿ ಎಂದು ಹೇಳಿ ಒಂದು ಹಿಡಿ ಹೂವು ಮಂತ್ರಾಕ್ಷತೆಯನ್ನು ಹಿಡಿದುಕೊಂಡು ಅ ಅನ್ನದ ರಾಶಿಗೆ ಮೂರು ಪ್ರದಕ್ಷಿಣೆ ಮಾಡಿಪೂಜೆಮಾಡಿ, ಅದರಲ್ಲಿ ಶ್ರೀ ಗಣೇಶನನ್ನು ಆವಾಹಿಸಿ ಹೊರಗೆ ಬಂದು ಕುಳಿತರು. ಅಂದು ಸಂಜೆಯವರೆಗೂ ಭೋಜನ ನಡೆಯುತ್ತಲೇ ಇತ್ತು. ಅಂದು ನನ್ನ ಅಂದಾಜಿನಲ್ಲಿ ಸುಮಾರು ಎರಡು ಸಾವಿರಕ್ಕೂ (2500) ಹೆಚ್ಚು ಜನ ಊಟ ಮಾಡಿದ್ದಾರೆ. ಮಾರನೆಯ ದಿನ ಬೆಳಿಗ್ಗೆ ಮಿಕ್ಕಿದ್ದ ಅನ್ನ ಪ್ರಸಾದವನ್ನು ಹಂಚಲಾಯಿತು. ಈ ಪವಾಡಕ್ಕೆ ನಾನೂ ಸಾಕ್ಷಿ.

ನವಗ್ರಹ ಗುಡಿಯದೂ ಒಂದು ಕಥೆ. ಒಬ್ಬ ಮಹನೀಯರು ನವಗ್ರಹ ಗುಡಿ ನಿರ್ಮಾಣ, ವಿಗ್ರಹ ಕೆತ್ತಿಸುವಿಕೆ, ಪ್ರತಿಷ್ಠಾಪನೆ ಎಲ್ಲಾ ಖರ್ಚನ್ನು ತಾವೇ ವಹಿಸಿಕೊಳ್ಳುವುದಾಗಿ ತಿಳಿಸಿದ್ದರು. ಪ್ರತೀಸಲ  ಅವರನ್ನು ನೋಡಲು ಹೋದಾಗಲೆಲ್ಲಾ ಒಂದೊಂದೇ ಆಶ್ವಾಸನೆಗಳನ್ನು ಹಿಂತೆಗೆದುಕೊಳ್ಳುತ್ತಾ ಬಂದರು. ಕಡೆಗೆ ಅವರ ಬಳಿಗೆ ಹೋಗುವುದನ್ನು ನಾವೇ ನಿರಾಶರಾಗಿ ಬಿಟ್ಟು ಬಿಟ್ಟೆವು.

ಅನಂತರ ನಲ್ಲಪೇಟ ಲಕ್ಷ್ಮಯ್ಯಶೆಟ್ಟರು ಇಡೀ ನವಗ್ರಹ ದೇವಾಲಯದ ನಿರ್ಮಾಣ, ವಿಗ್ರಹ ಕೆತ್ತಿಸುವಿಕೆ, ಪ್ರತಿಷ್ಠಾಪನೆ, ಅನ್ನದಾನ, 80 ದಂಪತಿಗಳಿಗೆ ವಸ್ತದಾನ, ಎಲ್ಲವನ್ನು ಅದ್ದೂರಿಯಾಗಿ ನಡೆಸಿಕೊಟ್ಟರು.

ಅಂದಿನ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ | ಅಭಿನವ ವಿದ್ಯಾತೀರ್ಥರು ಶ್ರೀ ಶಂಕರ ಮತ್ತು ಶಾರದಾ ವಿಗ್ರಹಗಳನ್ನು ಮಾಡಿಸಿಕೊಟ್ಟಿದ್ದಲ್ಲದೇ ಅವರೇ ಖುದ್ದಾಗಿ ಬಂದು, ಆ ವಿಗ್ರಹಗಳ ಪ್ರತಿಷ್ಠಾಪನೆ, ಗರ್ಭಗೃಹದ ಮೇಲೆ 21 ಅಡಿಯ ಭವ್ಯ ವಿಮಾನಗೋಪುರದ ಕುಂಭಾಭಿಷೇಕವನ್ನು ಸ್ವಹಸ್ತದಿಂದ ನೆರವೇರಿಸಿ ಕೊಟ್ಟರು.

ರಾಜಗೋಪುರದ ಕುಂಭಾಭಿಷೇಕವನ್ನು ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ ಗುರುಗಳಾದ ಬ್ರಹೀಭೂತ ಪೂಜನೀಯ ರಾಧಾಕೃಷ್ಣ ಸಾಯಿಪಾದಾನ೦ದರು ನೆರವೇರಿಸಿಕೊಟ್ಟರು.

ಹನಿ ಹನಿಗೂಡಿದರೆ ಹಳ್ಳ ತೆನೆ ತೆನೆಗೂಡಿದರೆ ಬಳ್ಳ ಎಂಬ ನಾಣ್ಣುಡಿಯಂತೆ, ಅನೇಕ ಭಕ್ತರ ಪ್ರತ್ಯಕ್ಷ ಹಾಗೂ ಪರೋಕ್ಷ ಸೇವೆಯಿಂದ, ತನು, ಮನ, ಧನಗಳ ಅರ್ಪಣೆಯಿಂದ ಇಂದು ಅನೇಕ ದೇವತಾ ವಿಗ್ರಹಗಳ ಸಾನ್ನಿಧ್ಯದಿಂದ ಪ್ರಸಿದ್ದ ದೇವಾಲಯವಾಗಿ ವಿಜೃಂಭಿಸುತ್ತಿದೆ.

ಏತನ್ಮಧ್ಯೆ, ಈ ಗೋಪುರಗಳಲ್ಲಿನ ಗಾರೆ ವಿಗ್ರಹಗಳ ಭಿನ್ನವಾಗಿರುವಿಕೆ, ಬಿರುಕುಬಿಡುವಿಕೆ, ಮುಂತಾದ ನ್ಯೂನತೆಗಳನ್ನು ಸೂಕ್ತರೀತಿಯಲ್ಲಿ ಸರಿಪಡಿಸಿ ಎಲ್ಲಾ ಗೋಪುರಗಳಿಗೂ ಅಷ್ಟಾಂಗ ಯೋಗ ವಿಜ್ಞಾನ ಮಂದಿರ ಗುರುಗಳಾದ ಪರಮಪೂಜ್ಯ ( ಬಭೂತ) ಶ್ರೀ ಶ್ರೀ ಶ್ರೀ ರಂಗಪ್ರಿಯ ಮಹಾ ದೇಶಿಕರ ದಿವ್ಯ ಉಪಸ್ಥಿತಿಯಲ್ಲಿ ಕುಂಭಾಭಿಷೇಕವನ್ನು ನೆರವೇರಿಸಲಾಯಿತು.

ದಿ।। ರಾಜಗೋಪಾಲ ಅಯ್ಯರ್‌ರವರ ಪ್ರಚಂಡ ತಪಸ್ಸಿನ ಫಲವಾಗಿ ಈ ದೇವಾಲಯ ಮೆರೆಯುತ್ತಿದೆ.

ನಮ್ಮ ದೇವಾಲಯದಲ್ಲಿ ಶ್ರೀ ಗಣೇಶನ ಉತ್ಸವವು ಅತಿಶಯವಾದದ್ದು, ಭಾದ್ರಪದ ಶುದ್ಧ ಚೌತಿಯಂದು ಆರಂಭವಾಗುವ ಉತ್ಸವವು 11 ದಿನ ನಡೆದು ಶ್ರೀ ಅನಂತ ಪದ್ಮನಾಭ ವ್ರತದಿನದ ಸಂಜೆಯಂದು ನಡೆಯುವ ರಥೋತ್ಸವದ ಮೂಲಕ ಸಮಾಪ್ತಿಗೊಳ್ಳುತ್ತದೆ.

ಒಂದು ದಿನ ಈ ಉತ್ಸವದಲ್ಲಿ ದಿ।। ಭುವನೇಶ್ವರಯ್ಯನವರ ಪೀಟೀಲು ಕಛೇರಿ ನಡೆಯುತ್ತಿತ್ತು. ನಮ್ಮ ದೇವಾಲಯಕ್ಕೆ ಶಾಶ್ವತವಾಗಿ ಕಾಠ್ಯದರ್ಶಿಸ್ಥಾನವನ್ನು ಶ್ರೀ ಅಯ್ಯರ್ ಅವರೇ ನಿರ್ವಹಿಸುತ್ತಿದ್ದು, ಸಾಮಾನ್ಯವಾಗಿ ಯಾವುದೇ ಸಂಘ ಸಂಸ್ಥೆಗಳಲ್ಲಿ ವಂದನಾರ್ಪಣೆಯನ್ನು ಕಾರ್ಯದರ್ಶಿಯವರೇ ನಡೆಯಿಸಿ ಕೊಡುತ್ತಾರೆ. ಅಂದು ಆ ಪಿಟೀಲು ಕಚೇರಿಯ ದಿನ ಶ್ರೀ ಅಯ್ಯರ್‌ರವರು ನನ್ನನ್ನು ಕರೆದು, ಇಂದು ನನಗೆ ಆರೋಗ್ಯ ಸರಿಯಿಲ್ಲ ನೀನು ಮಾಡು ಎಂದರು. ನಾನು ಮಾಡಲು ಹಿಂದೇಟುಹಾಕಿದಾಗ ನನಗೆ ಧೈರ್ಯ ತುಂಬಿ ವೀಭೂತಿಯನ್ನು ಮಂತ್ರಿಸಿಕೊಟ್ಟು ವಂದನಾರ್ಪಣೆ ಮಾಡುವಂತೆ ಅಪ್ಪಣೆ ಮಾಡಿದರು. ವಂದನಾರ್ಪಣೆ ಮಾಡಿ ನನ್ನ ಪಾಡಿಗೆ ನಾನು

ಮನೆಗೆ ಹೋದೆನು. ಮಾರನೆಯ ದಿನ ರಾತ್ರಿ ನಾನು ಗುಡಿಗೆ ಬಂದಾಗ ಅಥವಾ ಅಪ್ಪ ಅವರು ನೋಡು ನಾಗರಾಜು! ನಿನ್ನೆ ನೀನು ಮಾಡಿದ ವಂದನಾರ್ಪಣೆ ಚೆನ್ನಾಗಿತ್ತು. ಇನ್ನು ಮೇಲೆ ಅವರ ಕೈಯಲ್ಲೇ ವಂದನಾರ್ಪಣೆ ಮಾಡಿಸಿ ಎಂದು ವಿದ್ವಾನ್ಭುವನೇಶ್ವರಯ್ಯ ನವರು ಹೇಳಿಹೋದರು. ದೊಡ್ಡವರು ಅವರು ಹೇಳಿದ್ದಾರೆ. ಆದ್ದರಿಂದ ಇನ್ನು ಮೇಲೆ ಪ್ರತಿ ಕಾರ್ಯಕ್ರಮದಲ್ಲೂ ನೀನೇ ವಂದನಾರ್ಪಣೆ ಮಾಡತಕ್ಕದ್ದು ಎಂದರು.

ಅವರ ಅಂದಿನ ಆದೇಶವು ಇಂದಿಗೂ ನನ್ನ ಪಾಲಿಗೆ ಹಾಗೆಯೇ ಉಳಿದು ಬಂದಿದೆ. 1970ರ ಶ್ರೀ ಗಣೇಶೋತ್ಸವದಲ್ಲಿ ಪ್ರಾರಂಭ ಮಾಡಿದ ವಂದನಾರ್ಪಣೆ ಜವಾಬ್ದಾರಿಯು ಇಂದಿಗೂ ಮುಂದುವರಿದಿದೆ. 47 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಇಷ್ಟು ದೀರ್ಘಕಾಲ ಯಾವುದೇ ಸಂಸ್ಥೆಯಲ್ಲೂ ಒಬ್ಬರೇ ವಂದನಾರ್ಪಣೆ ಮಾಡಿಕೊಂಡು ಬಂದಿಲ್ಲವೆನ್ನಬಹುದು. ಹಾಗೆಯೇ ಮುಂದುವರೆದು, ಇಂದು ಬೆಂಗಳೂರಿನಲ್ಲಿರುವ ವೇದಾಂತ ವಿದ್ವಾಂಸರಲ್ಲಿ ನಾನು ಒಬ್ಬನಾಗಿದ್ದೇನೆಂದರೆ ಅದು ಶ್ರೀವರಸಿದ್ಧಿವಿನಾಯಕನು ನನ್ನ ನಾಲಿಗೆಯ ಮೇಲೆ ಮಾಡುತ್ತಿರುವ ನರ್ತನವೆಂದೇ ನಂಬಿದ್ದೇನೆ.

1967ರಲ್ಲಿ ಪ್ರತಿಷ್ಠಾಪನೆಯಾದರೂ, ಅದಕ್ಕೂ ಹಿಂದೆಯೇ 1955 ರಿಂದಲೂ ಶ್ರೀ ಗಣೇಶ ಮಂದಿರಂ ಸಂಸ್ಥೆಯು ಉತ್ಸವಾದಿಗಳನ್ನು ನಡೆಸಿಕೊಂಡು ಬರುತ್ತಿದೆ. ಅಂದಿನಿಂದಲೂ ಇಂದಿಗೂ ನಾದಸ್ವರ ಸೇವೆಯನ್ನು ಡೋಲು ನಾರಾಯಣಸ್ವಾಮಿ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದಾರೆ.

ಇಂದು ನಮ್ಮ ಈ ದೇವಾಲಯದ ನಿರ್ಮಾಣ ಹಂತದಿಂದಲೂ ನಮ್ಮೊಡನಿದ್ದ ಬಹಳ ಮಂದಿ ಇಂದು ಇಲ್ಲ. ಆದರೆ, ಅವರ ಕಾಣಿಕೆ, ಸೇವೆಗಳನ್ನೂ ಯಾರು ಮರೆತರೂ ನಾವು ಮರೆಯುವುದಿಲ್ಲ. ಅವರೆಲ್ಲಾ ಶ್ರೀವರಸಿದ್ಧಿ ವಿನಾಯಕ ಸ್ವಾಮಿಯ ಅಡಿದಾವರೆಗಳಲ್ಲಿ ಐಕ್ಯರಾಗಿದ್ದಾರೆ.

ಪರಮ ಪೂಜ್ಯ ರಾಜಗೋಪಾಲಯ್ಯರ್ (ಇವರನ್ನು ಎಲ್ಲರೂ ಆತ್ಮೀಯವಾಗಿ ಕರೆಯುವುದು ಓಂ ಗಣೇಶ ಎಂದು) ದಿನಾಂಕ 05-09-1925ರಂದು ಬೆಂಗಳೂರು ಅಲಸೂರು ಪೇಟೆಯಲ್ಲಿ ದಿ।। ನೀಲಕಂಠ ಶಾಸ್ತ್ರಿಗಳು ಹಾಗೂ ದಿ।। ಸೀತಾಲಕ್ಷ್ಮಿ ಅಮಾಲ್ ದಂಪತಿಗಳಿಗೆ ಪುತ್ರರತ್ನರಾಗಿ ಜನಿಸಿದರು. ಇವರ ಬಾಲ್ಯ ವಿದ್ಯಾಭ್ಯಾಸ ಎಲ್ಲವೂ ಅಲ್ಲಿಯೇ ನಡೆಯಿತು. ಅನಂತರ ದಿನಾಂಕ 13-07-1949 ರಂದು ಶ್ರೀಮತಿ ವನಜಾಕ್ಷಿಯವರೊಡನೆ ಅವರ ವಿವಾಹವಾಯಿತು. ನಾಲ್ಕು ಜನ ಪುತ್ರಿಯರು ಹಾಗೂ ಮೂರು ಜನಪುತ್ರರಿಂದ ಕೂಡಿದ ತುಂಬು ಸಂಸಾರವು ಓಂ ಗಣೇಶ ದಂಪತಿಗಳದ್ದು.

ಮನೆ ಮನೆಗೂ ಹೋಗಿ ಕೇಳಿದಾಗ, ಭಕ್ತಾದಿಗಳು ನೀಡಿದ ಸಹಾಯ, ಸಹಕಾರಗಳಿಂದ ಓಂ ಗಣೇಶರು ಶ್ರೀ ಗಣೇಶ ಮಂದಿರದ ನಿರ್ಮಾಣ ಪ್ರತಿಷ್ಠಾಪನೆ, ಅಭಿವೃದ್ಧಿ, ಉತ್ಸವಗಳು ಮುಂತಾದ ಕಾರಗಳಲ್ಲಿ ಮುಳುಗಿ ಹೋಗಿದ್ದಾಗ ಅವರಿಗೆ ಸಂಸಾರದ ಜವಾಬ್ದಾರಿಯನ್ನು ಹೊರಿಸದೇ ಕಾರ್ಯಷು ದಾಸೀ, ಕರಣೇಷುಮಂ ಎಂಬ ಮಾತಿನಂತೆ ಜೀವನದುದ್ದಕ್ಕೂ ನಡೆಸಿಕೊಂಡು ಬಂದಿರುವ ಮಾತು: ಶ್ರೀ ವನಜಮ್ಮ ನವರನ್ನು ನಾವು ಭಕ್ತಿಪೂರ್ವಕವಾಗಿ ನಮಿಸುತ್ತೇವೆ.

ಒಬ್ಬನೇ ವ್ಯಕ್ತಿಯು ತಮ್ಮ ಜೀವನದಲ್ಲಿ ಸಾಧಿಸಲಾದೀತೇ ಎಂದು ಪ್ರಶ್ನಿಸುವಷ್ಟು ಮಟ್ಟಿಗೆ ಮಹತ್ಕಾರ್ಯಗಳನ್ನು ಸಾಧಿಸಿ, ಎಲ್ಲರ ಅಭಿಮಾನಕ್ಕೆ ಪಾತ್ರರಾಗಿ ಬದುಕಿ ಬಾಳಿದ ಓಂಗಣೇಶರು ದಿನಾಂಕ 14-05-2009ರಂದು ಶ್ರೀ ವರಸಿದ್ಧಿವಿನಾಯಕಸ್ವಾಮಿಯ ಪಾದಾರವಿಂದಗಳಲ್ಲಿ ಲೀನವಾಗಿ ಹೋದರು. ಅವರ ಭೌತಿಕ ಶರೀರವು ಅನಂತದಲ್ಲಿ ಸೇರಿಹೋಗಿದ್ದರೂ, ನಮ್ಮ ದೇವಾಲಯದ ಗೋಡೆಗೋಡೆಗಳಲ್ಲಿ, ಕಂಭ ಕಂಭಗಳಲ್ಲಿ ಅವರ ಸಾನ್ನಿಧ್ಯವನ್ನು ನಾವು ಇಂದಿಗೂ ಅನುಭವಿಸಿದ್ದೇವೆ. – ಓಂಗಣೇಶರು ಹಾಕಿ ಕೊಟ್ಟ ಮಾರ್ಗದಲ್ಲಿ ಅವರ ಕಿರಿಯ ಮಗ ಚಿ। ಗಣೇಶಪ್ರಸಾದ್‌ರವರು ಈಗ ಮಂದಿರದ ಕಾರ್ಯದರ್ಶಿಯಾಗಿ ಸಮರ್ಪಕವಾಗಿ ಕಾರನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಶ್ರೀ ಮಂದಿರದ ಗರ್ಭಗುಡಿಗಳ ಮೇಲಿನ ವಿಮಾನ ಗೋಪುರ, ರಾಜಗೋಪುರ ಮತ್ತು ಸಭಾಮಂಟಪ ಇವೆಲ್ಲವುಗಳನ್ನೂ ಸುಂದರವಾಗಿ ಹಾಗೂ ಭದ್ರವಾಗಿ ಕಟ್ಟಿ ಕೊಟ್ಟಿರುವ ಶಿಲ್ಪಿ ದಿ। ಕರುಪ್ಪಯ್ಯ ಸ್ಥಪತಿಯವರು ದೀರ್ಘಾ ಕಾಲ ಮಾಡಿರುವ ಸೇವೆಯನ್ನು ನಾವು ಯಾರೂ ಎಂದೆಂದಿಗೂ ಮರೆಯಲಾರೆವು.

“WHERE THERE IS BELIEF, THERE IS RELIEF” ಎಂಬಮಾತಿನಂತೆ, ಶ್ರೀವರಸಿದ್ಧಿ ವಿನಾಯಕನಲ್ಲಿ ನಿಷ್ಠೆಯಿಂದ. ನಡೆದುಕೊಂಡರೆ ಖಂಡಿತಾ ಒಳ್ಳೆಯದಾಗುತ್ತದೆ. ಆದರೆ, ಅವನು ಕೊಡುವ ವರಗಳು ಬೇಗ ಅರ್ಥವಾಗುವುದಿಲ್ಲ. ಅರ್ಥವಾದ ಮೇಲೆ ಅವನು ಆನಂದಿಸುತ್ತಾನೆ. ಅದಕ್ಕೆ ಅವನ ಕೈಯಲ್ಲಿರುವ ಮೋದಕವೇ ಸಾಕ್ಷಿ. ಅದು ಸಿಹಿ ಪದಾರ್ಥವೇ, ಆದರೆ ಸಪ್ಪೆ, ಅದನ್ನು ಮುರಿದು ತಿಂದಾಗ ಸಿಹಿಯು ಅನುಭವಕ್ಕೆ ಬರುತ್ತದೆ. ಅದನ್ನು ನಾವು ಅನುಭವಿಸುತ್ತಾ ಇರೋಣ.

ಇಂತು, ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಚರಣಕಿಂಕರ,

ಡಾ।। ನಾಗರಾಜು ಎಸ್., ಎಂ.ಎ, ಪಿ.ಹೆಚ್.ಡಿ. (ಸಂಸ್ಕೃತ)

“ಓಂ ತತ್ಸತ್”

One thought on “ಶ್ರೀ ಗಣೇಶ ಮಂದಿರದ ಕಿರು ಪರಿಚಯ”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.