ವಕ್ರತುಂಡ, ಗಜವದನ ಗಣೇಶ ವಿಘ್ನನಿವಾರಕನೆಂದೇ ಪ್ರಸಿದ್ಧ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಸಂಕಷ್ಟ ಹರ ಚತುರ್ಥಿ ಎಂದೇ ಹೆಚ್ಚು ಪರಿಚಿತ.
ಪ್ರತಿ ತಿಂಗಳ ಕೃಷ್ಣಪಕ್ಷದ 4 ನೆಯ ದಿನವನ್ನು(ಚತುರ್ಥಿ)ಯನ್ನು ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ ವ್ರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವಿದ್ದು, ಅದನ್ನು ಅಂಗಾರಕ (ಮಂಗಳ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ.
ಸಂಕಷ್ಟ ಹರ ಚತುರ್ಥಿಯ ಮಹತ್ವ:
ಸಂಕಷ್ಟಹರ ಚತುರ್ಥಿಯ ಆಚರಣೆಗಳಿಗೆ ಸನಾತನ ಧರ್ಮದಲ್ಲಿ ಎರಡು ಪ್ರಮುಖ ಹಿನ್ನೆಲೆಗಳಿವೆ. ಮೊದಲನೆಯದ್ದು ಚತುರ್ಥಿಯ ದಿನದಂದು ಅಂದರೆ ಯಾವ ದಿನ ಸಂಕಷ್ಟಹರ ಚತುರ್ಥಿಯ ಆಚರಣೆ ನಡೆಸಲಾಗುತ್ತದೆಯೋ ಆ ದಿನದಂದು ಗಣೇಶನನ್ನು ಸರ್ವೋಚ್ಛ ದೇವ ಎಂದು ಘೋಷಿಸಲಾಯಿತು ಎಂಬುದು ಒಂದು ನಂಬಿಕೆಯಾದರೆ, ಈ ದಿನದಂದು ಗಣೇಶ ಸ್ವತಃ ಧರೆಗಿಳಿದು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾನೆ, ಆದ್ದರಿಂದ ಚತುರ್ಥಿಯ ದಿನದಂದು ಪ್ರಾರ್ಥಿಸುವವರ ಸಂಕಷ್ಟಗಳು ಸುಲಭವಾಗಿ ಬಗೆಹರಿಯುತ್ತದೆ ಎಂಬುದು ಮತ್ತೊಂದು ನಂಬಿಕೆಯಾಗಿದೆ.
ಆಚರಣೆ ಹೇಗೆ?
ಸಾಧ್ಯವಾದಲ್ಲಿ ಉಪವಾಸ ಮಾಡಬಹುದು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು.
ಪೂಜೆ ಸಮಾಪ್ತಿಯಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.